Faculty

"ಓ ಗುರುವೇ
ನಿಮಗೆ ನನ್ನ ನಮಸ್ಕಾರ|
ತಂದೆಯಾಗಿ-ತಾಯಿಯಾಗಿ
ಸಲುಹಿದೇ ನೀನು|
ಪ್ರೀತಿ-ಪ್ರೇಮ ನೀಡಿ
ಕರುಣೆಯತೋರಿದೆ||
ಭಯವನ್ನುದೂರ ಮಾಡಿ
ಜಯವನ್ನು ನೀಡಿದೆ|
ನೋವುಗಳನ್ನು ದೂರಮಾಡಿ
ಸುಖವನ್ನು ನೀಡಿದೆ||
ವಿದ್ಯೆಯನ್ನುಕೊಟ್ಟು
ಅಜ್ಞಾನವನ್ನು ಹೊಡೆದೋಡಿಸಿದೆ|
ಕರುಣೆಯಿಂದ ಸಲುಹಿದೆ
ನಮ್ಮನ್ನುಗುರಿಯೆಡೆಗೆ ನಡೆಸಿದೆ||
ಅಜ್ಞಾನದಿಂದಜ್ಞಾನದಕಡೆಗೆ
ವಿದ್ಯೆಯಿಂದಗುರಿಯೆಡೆಗೆ|
ಪ್ರೀತಿ-ಪ್ರೇಮ-ನಂಬಿಕೆ-ಗೌರವ
ಕೊಟ್ಟು ಸಲುಹಿದಿರಿ, ನಿಮಗಿದೋ ನಮಸ್ಕಾರ||
ಓ ಗುರುವೇ
ನಿಮಗೆ ನನ್ನ ನಮಸ್ಕಾರ||
ಪ್ರೊ.ದೀಪಾ ಬ ಅಂಗಡಿ
ಅಧ್ಯಾಪಕ
ಕೆ.ಎಲ್.ಇ ವಾಣಿಜ್ಯ ಮಹಾವಿದ್ಯಾಲಯ,
ಬೆಳಗಾವಿ

ಸಂಜೆ ಆರರ ಸಮಯ. ಸೂರ್ಯನಿಗೂ ಸುಸ್ತಾಗಿದೆ. ಕೆಲಸ ಮುಗಿಸಿ ಹೊರಟ ಗಂಡಸರ ಮುಖದಲ್ಲಿ ಬಸವಳಿದ ಕಳೆ. ಬೆಳಿಗ್ಗೆ ಗಡಿಬಿಡಿಯಲ್ಲಿ ಮಾಡಿಕೊಂಡ ಹೆಣ್ಣುಮಕ್ಕಳ ಅಷ್ಟಿಷ್ಟು ಮೇಕಪ್ಪೂ ಬಣ್ಣಗೆಟ್ಟಿದೆ. ಆಫಿಸಿನಿಂದ ಹೊರಡುವಾಗ ವಾಷರೂಮಿಗೆ ಹೋಗಿ ತೆಳ್ಳಗೆ ಬಳಿದುಕೊಂಡ ಒಂದಿಷ್ಟು ಪೌಡರ್ ಕೂಡಾ ಹೇಳಹೆಸರಿಲ್ಲದೇ ಕರಗಿ ಮುಖಕ್ಕಂಟಿಕೊಂಡಿದೆ. ಯಾರಿಗೂ ಅವೆಲ್ಲದರ ಚಿಂತೆಯಿಲ್ಲ. ಗಮ್ಯವೊಂದರ ಕಡೆ ಗಡಿಬಿಡಿಯಿಂದ ಹೊರಟಿದೆ ಅವರ ಪಯಣ. ಆ ಗಮ್ಯ ಬಹುತೇಕರ ಪಾಲಿಗೆ ಮನೆಯೇ ಆಗಿದೆ ಎಂಬುದು ನನಗೆ ಗೊತ್ತು. ಶಾಲೆಗೆ ಹೋದ ಮಕ್ಕಳು ಬಂದು ಮನೆಬಾಗಿಲಿಗೆ ಕಾಯುತ್ತಿರುತ್ತವೆ ಎನ್ನುವ ಧಾವಂತ ತಾಯಂದರದಾದರೆ, ಎಷ್ಟೇ ಅಂಡಲೆದರೂ ಉಂಡು ಮಲಗಲು ಮನೆಯೇ ಗತಿ ಎನ್ನುವುದು ಗಂಡಸರಿಗೂ ಗೊತ್ತಿದೆ. "Home sweet home, there is no place like home" ಎಂದುಕೊಳ್ಳುತ್ತ ಹಕ್ಕಿಗಳೂ ಗೂಡು ಸೇರಲು ತವಕಿಸುವ ಆ ಹೊತ್ತಿನಲ್ಲೇ ಅದೇ ಮೂಡಿನಲ್ಲಿ, ಅಷ್ಟೇ ಗಡಿಬಿಡಿಯಿಂದ ಹೊರಟ ಅವನ ಕೈಯಿಂದ ಜಾರಿ ಅವನಿಗರಿವಿಲ್ಲದೇ ಬಿದ್ದೆ ನಾನು, ಆ ಬೀಝಿ ರೋಡಿನ ಮಧ್ಯದಲ್ಲಿ!

ಅರೇ ಅವನಿಗೆ ಗಮನವೇ ಇಲ್ಲ. ಗೊತ್ತೇ ಆಗಿಲ್ಲ ನಾನು ಜಾರಿದ್ದು. ಕಾರು, ಸ್ಕೂಟರು, ಬಸ್ಸು, ಲಾರಿಗಳ ಪ್ರಚಂಡ ಶಬ್ದಸಂತೆಯಲ್ಲಿ ನಾ ಬಿದ್ದ ಸದ್ದು ಅವನಿಗೆ ಕೇಳುವುದಾದರೂ ಎಂತು? ಹೊರಟೇ ಹೋದ. ಇನ್ನೊಬ್ಬನಾದರೂ ಯಾವನೋ ಪುಣ್ಯಾತ್ಮ ಎತ್ತಿ ಕಾಪಾಡಬಹುದೆಂದು ಕಾತರದಿಂದ ಕಾಯುವುದಲ್ಲದೇ ಇನ್ನೇನು ಮಾಡಲಿ ನಾನು? ಸಾವಿರಾರು ಜನರು ತಮ್ಮ ಸಾವಿರ-ಸಾವಿರ ವಾಹನಗಳ ಮೇಲೆ ಹೋಗುವ-ಬರುವ ಮುಖ್ಯ ಮಾರ್ಗವಿದು. ಅರಿವಾಗದೇ ಹೋದೀತೇ ಒಬ್ಬರಿಗಾದರೂ? ಅಯ್ಯೋ 'ಖಟ್' ಎಂದು ನನ್ನ ಮೇಲೇ ಗಾಡಿಯೊಂದು ಹಾಯ್ದ ಶಬ್ದ. ಇದ್ದಲ್ಲಿಂದ ಜಿಗಿದು ಆ ಕಡೆ ಬಿದ್ದೆ. ದೇವರ ದಯೆ, ಮೈ ಮುರಿಯದೇ ಒಂದಾಗಿಯೇ ಉಳಿದಿದ್ದೇನೆ. ಅದೆಂಥ ಗಡಿಬಿಡಿ ಈ ಜನಕ್ಕೆ! ಬಿದ್ದ ನನ್ನನ್ನು ನೋಡಿದರೂ ನಿಲ್ಲಲಾರದೇ ಓಡುವರಲ್ಲ! ಹೌದು ಮೊದಲಿಗಿಂತಲೂ ಇವರ ಜೀವನ ಗಡಿಬಿಡಿಯಿಂದ, ಒತ್ತಡದಿಂದ ಕೂಡಿದೆ ಎನ್ನುವ ಸತ್ಯ ನನಗೂ ಗೊತ್ತೇ ಇದೆ. ಒಂದೋಂದು ಕ್ಷಣವನ್ನೂ ಒತ್ತಡದಲ್ಲೇ ಕಳೆಯುವ ಇವರಿಗೆ ಯಾರನ್ನೂ ನೋಡಲು ಪುರುಸೊತ್ತಿಲ್ಲ. ರಸ್ತೆಯಲ್ಲಿ ಬಿದ್ದವನನ್ನು ಎಬ್ಬಿಸಿ ಉಪಚರಿಸುವ ಮನುಷ್ಯತ್ವವನ್ನೂ ಕದ್ದಿರುವ ಈ ಧಾವಂತಕ್ಕೆ ಧಿಕ್ಕಾರವಿರಲಿ. ಓಹ್! ಇನ್ನೊಂದು ಪ್ರಹಾರ ಬಸ್ಸಿನಿಂದ. ನನ್ನ ಮೈಯ ಭಾಗಗಳೆಲ್ಲ ಲಟಲಟನೇ ಮುರಿಯುತ್ತಿವೆ. ಮುಖವೊಡೆದು ಚಲ್ಲಾಪಿಲ್ಲಿಯಾಗಿದೆ. ಅಷ್ಟರಲ್ಲಿ ಮತ್ತೊಂದು ಕಾರು, ಇನ್ನೊಂದು ಬೈಕು ಹಾಯ್ದು ಚಿಂದಿಚಿಂದಿಯಾಗಿ ಹೋಗುತ್ತಿದ್ದೇನೆ. ನನ್ನ ಹೃದಯ ಬಡಿತ ನಿಂತು ಹೋಯಿತು. ಆದರೆ ಇವರಿಗೆ ಅದಾವುದರ ಲಕ್ಷ್ಯವೂ ಇಲ್ಲ. ಇವರು ಓಡುತ್ತಿದ್ದಾರೆ, ಓಡಿಯೇ ಓಡುತ್ತಿದ್ದಾರೆ ತಮ್ಮ ಗಮ್ಯದ ಕಡೆಗೆ, ಒಂದಿಷ್ಟೂ ಕರುಣೆಯಿಲ್ಲದೇ, ಒಂಚೂರೂ ಪುರುಸೊತ್ತಿಲ್ಲದೇ. ಆದರೆ ಅವನಿಗೆ! ಇಷ್ಟೊಂದು ತರಹದ ಮೊಬೈಲುಗಳು ಬಂದು ಸಮಯವನ್ನು ತೋರುತ್ತಿದ್ದರೂ, ಅವುಗಳ ಗೋಜಿಗೆ ಹೋಗದೇ ತನ್ನ ಪಾಡಿಗೆ ತಾನಿದ್ದು, ತನ್ನೆಲ್ಲ ಅಮೂಲ್ಯ ಘಳಿಗೆಗಳಲ್ಲಿ ನನ್ನನ್ನೇ ಅವಲಂಬಿಸಿದ ಆತನಿಗೆ ಪಾಪ, ಸಮಯ ನಿಂತಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಅವನ ಕೈಯಲಂಕರಿಸಿ, ಅದರ ಗುರುತಿಗಾಗಿ ಅಲ್ಲೊಂದು ಬಿಳಿ ಕಲೆಯನ್ನುಂಟು ಮಾಡಿ, ನನ್ನ ಪ್ರತಾಪ ತೋರಿಸಿದ್ದ, ಅವನೆಲ್ಲ ಹೊತ್ತಿಗೂ ಹೊತ್ತಾದ ನಾನು ಅವನ ಪ್ರೀತಿಯ ಕೈಗಡಿಯಾರ ಅವನಿಗರಿವಿಲ್ಲದೇ ಅವನ ಕೈಜಾರಿ ಬಿದ್ದು, ಒಂದಾದ ಮೇಲೊಂದು ವಾಹನಗಳಡಿಗೆ ಸಿಕ್ಕು ಸತ್ತುಹೋಗಿದ್ದೇನೆ. ಹಾಗಾಗಿ ನನ್ನ ಆ ಅವನ ಪಾಲಿಗೆ ಸಮಯ ನಿಂತು ಹೋಗಿದೆ, ಆದರೆ ಹೊತ್ತಾಯಿತೆಂದು ಈ ಜನ ಮಾತ್ರ ಓಡುತ್ತಲೇ ಇದ್ದಾರೆ.

(ನಿನ್ನೆ ಮೇನ್ ರೋಡಿನ ಟ್ರಾಫಿಕ್ಕಿನಲಿ ಬರುವಾಗ ಕಂಡ ಯಾರದೋ ವಾಚು ನೋಡಿದಾಗ ಹುಟ್ಟಿಕೊಂಡ ಕಲ್ಪನೆ)
ನೀತಾ ರಾವ್ fb post on 18th December,2015.